ದಕ್ಷಿಣ ಭಾರತದ ಒಂದು ಪ್ರಸಿದ್ದ ರಾಜಮನೆತನವಾದ ತಲಕಾಡು ಗಂಗವಂಶದ ಅರಸ (ಸು. 870-919). ನೀತಿಮಾರ್ಗ ಎರೆಗಂಗನ ಜ್ಯೇಷ್ಠಪುತ್ರ. ತಂದೆಯ ಮರಣಾನಂತರ ಪಟ್ಟಕ್ಕೆ ಬಂದ. ಸತ್ಯವಾಕ್ಯ ಎಂಬುದು ಇವನ ಬಿರುದು. ಯುವರಾಜ ಬೂತುಗ ಯುದ್ದಗಳಲ್ಲಿ ಅಣ್ಣ ರಾಚಮಲ್ಲನಿಗೆ ಸಹಾಯಕನಾಗಿದ್ದ. ಇವನ ಕಾಲದಲ್ಲೇ ಗಂಗರಾಜ ಕುಮಾರನೇ ಆದ ಮೊದಲನೆಯ ಪೃಥ್ವೀಪತಿಯ ಮಗನಾದ ನನ್ನಿಯಗಂಗನು ಬಾಣ ಮತ್ತು ವೈಡುಂಬರ ಸಹಾಯವನ್ನು ಪಡೆದ ರಾಚಮಲ್ಲನನ್ನು ಎದುರಿಸಿದುದು. ತಾತ್ಕಾಲಿಕವಾಗಿ ಬಾಣರು ಗಂಗರಾಜ್ಯದ ಕೆಲವು ಭಾಗಗಳನ್ನು ಗೆದ್ದುಕೊಂಡು ತಲಕಾಡನ್ನು ಆಕ್ರಮಿಸಿಕೊಂಡರು. ಆದರೆ ರಾಚಮಲ್ಲನ ಸ್ನೇಹಿತನೇ ಆಗಿದ್ದ ನೊಳಂಬ ಮಹೇಂದ್ರ ಸೋರೆಮಡ್ಡಿಯಲ್ಲಿ ಜರುಗಿದ ಘೋರ ಕದನದಲ್ಲಿ (892) ನನ್ನಿಯಗಂಗನನ್ನು ಸೋಲಿಸಿ ಅವನ ಹೆಸರಿಲ್ಲದಂತೆ ಮಾಡಿದ. ಈ ವಿಜಯದಿಂದ ನೊಳಂಬ ಮಹೇಂದ್ರ ಉತ್ತೇಜಿತನಾಗಿ ರಾಚಮಲ್ಲನನ್ನೇ ಕಡೆಗಣಿಸಲು ಪ್ರಾರಂಭಿಸಿದ. ಯುವರಾಜ ಬೂತುಗ ಮಹೇಂದ್ರನ ಮೇಲೆ ಯುದ್ಧಮಾಡಿ ಅವನನ್ನು ಪೂರ್ಣ ಸೋಲಿಸಲಾಗದಿದ್ದರೂ ತಡೆಹಿಡಿದ. ಬೂತುಗ ಮರಣಹೊಂದಲು ಅವನ ಮಗನಾದ ಎರಡನೆಯ ಎರೆಗಂಗ ಯುದ್ದವನ್ನು ಮುಂದುವರಿಸಿ 895 ರಲ್ಲಿ ನೊಳಂಬ ಮಹೇಂದ್ರನನ್ನು ಕೊಂದು ಮಹೇಂದ್ರಾಂತಕ ಎಂಬ ಬಿರುದು ಧರಿಸಿದ. ಎರೆಗಂಗನ ಪರಾಕ್ರಮವನ್ನು ಮೆಚ್ಚಿದ ಮಕ್ಕಳಿಲ್ಲದ ರಚಮಲ್ಲ ಅವನನ್ನು ರಾಜ್ಯಭಾರದಲ್ಲಿ ಸೇರಿಸಿಕೊಂಡ. ರಾಚಮಲ್ಲ ಪ್ರಜೆಗಳ ಯೋಗಕ್ಷೇಮವನ್ನೇ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಭಾರ ಮಾಡುತ್ತಿದ್ದನೆಂದು ಅನೇಕ ಶಾಸನಗಳು ಪ್ರಶಂಸಿಸಿವೆ. ಇವನು ಬ್ರಾಹ್ಮಣ ಮತ್ತು ಜೈನ ಸಂಸ್ಥೆಗಳಿಗೆ ವಿಶೇಷವಾಗಿ ದತ್ತಿಗಳನ್ನು ಬಿಟ್ಟುಕೊಟ್ಟ. ಜನರು ಪುಣ್ಯ ಕಾರ್ಯನಿರತವಾಗುವಂತೆ ಪ್ರೋತ್ಸಾಹಿಸಿ, ಹಾಗೆ ಪ್ರಸಿದ್ಧರಾದವರಿಗೆ ಪೆರ್ಮಾನಡಿ ಪಟ್ಟ ಎಂಬ ಗೌರವವನ್ನು ಕೊಡುತ್ತಿದ್ದ. ಇವನು ಕೊಂಬಾಳೆ ಎಂಬಲ್ಲಿ ರೋಗಪೀಡಿತನಾಗಿ ಮೃತನಾದ.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ